ನಕ್ಕೀರರ್
	ತಮಿಳು ಸಾಹಿತ್ಯದ ಕೊನೆಯ ಸಂಗಂ ಕಾಲದಲ್ಲಿದ್ದ ಶ್ರೇಷ್ಠ ಕವಿಗಳಲ್ಲೊಬ್ಬ. ಆ ಸಂಗಂನ ಮುಖ್ಯಸ್ಥನಾಗಿಯೂ ಇದ್ದ. ಈತನ ಹೆಸರು ನಕ್ಕೀರರ್, ನಕ್ಕೀರನಾರ್, ಮದುರೈ ನಕ್ಕೀರರ್, ಮದುರೈ ಕಣಕ್ಕಾಯನಾರ್ ಮಗನಾರ್ ನಕ್ಕೀರನಾರ್ ಎಂದು ಗ್ರಂಥಗಳಲ್ಲಿ ಕಾಣಬರುತ್ತದೆ. ಈತನ ನಿಜವಾದ ಹೆಸರು ಕೀರನಾರ್ ಎಂದಿದ್ದು ನ-ಎಂಬುದು ಗೌರವಾರ್ಥಕ ಪೂರ್ವಪ್ರತ್ಯಯವಾಗಿದೆ. ಈತನ ಹೆಸರಿನ ಹಿಂದಿರುವ ಮಧುರೈ ಕಣಕ್ಕಾಯನಾರ ಮಗನಾರ್ ಎಂಬ ಪದಗುಚ್ಛದಿಂದ ಈತನ ಊರು ಮದುರೈ ಎಂದೂ ತಂದೆ ಒಬ್ಬ ಉಪಾಧ್ಯಾಯನೆಂದೂ (ಕಣಕ್ಕಾಯನಾರ್) ತಿಳಿಯಬಹುದು. ಮುರುಗನ ಭಕ್ತನಾದ ಈತ ಬ್ರಾಹ್ಮಣ ಮತಸ್ಥನೆಂದೂ ಸಂಸ್ಕøತ-ತಮಿಳುಗಳೆರಡರಲ್ಲೂ ಕವಿತಾ ಸಾಮಥ್ರ್ಯವುಳ್ಳವನೆಂದೂ ಹೇಳಲಾಗಿದೆ. ಈತ ಕೀರಂಕೊಟ್ರನಾರ್‍ನ ತಂದೆ.

	ಈತನ ಬಗೆಗೆ ಅನೇಕ ಐತಿಹ್ಯಗಳುಂಟು. ಒಮ್ಮೆ ಶಿವಧರ್ಮಿ ಎಂಬ ಬ್ರಾಹ್ಮಣನಿಗಾಗಿ ರಚಿಸಿಕೊಟ್ಟ ಕೊಂಗುತೇರ್ ವಾಳೈ ಎಂಬ ಕವಿತೆಯ ಕಾರಣದಿಂದಾಗಿ ಈತನಿಗೂ ಶಿವನಿಗೂ ವಾಗ್ವಾದವೇರ್ಪಟ್ಟುದಾಗಿಯೂ ಆಗ ಕೋಪದಿಂದ ಶಿವ ಹಣೆಗಣ್ಣನ್ನು ತರೆದದಾಗಿಯೂ ಶಿವ ಹಣೆಗಣ್ಣನ್ನು ತೆರೆದರೂ ತಪ್ಪು ತಪ್ಪೇ ಎಂದು ಅಂಜದೆ ಈತ ವಾದಿಸಿದಂತೆಯೂ ಅದರಿಂದಾಗಿ ಶಿವನ ಕೋಪಕ್ಕೆ ಗುರಿಯಾಗಿ ಈತ ಕಷ್ಟಪಟ್ಟಂತೆಯೂ ಮತ್ತೆ ಶಿವನಿಗೆ ನಮಸ್ಕರಿಸಿ ಕೈಲಾಸಕ್ಕೆ ಹೋದುದಾಗಿಯೂ ಹೋಗುವ ದಾರಿಯಲ್ಲಿ ಭೂತವೊಂದು ಈತನನ್ನು ಹಿಡಿದು ಗುಹೆಯಲ್ಲಿ ತಳ್ಳಲು ಈತ ತಿರುಮುರುಗಾಟ್ರ್ ಪಡೈ ಎಂಬ ಗ್ರಂಥವನ್ನು ರಚಿಸಿ ಮುರುಗನ ಕರುಣೆಯಿಂದ ಬಿಡುಗಡೆ ಹೊಂದಿದನೆಂದೂ ಕಾಳಹಸ್ತಿಯಲ್ಲಿ ಕೈಲಾಸ ದರ್ಶನವನ್ನು ಕಂಡುದಾಗಿಯೂ ತಿರುವಾಲವಾಯುಡೈಯಾರರ ತಿರುವಿಳೈಯಾಡಲ್ ಪುರಾಣದಲ್ಲಿ ಹೇಳಲಾಗಿದೆ. ಅಲ್ಲದೆ ಈತ ಮಧುರೈಯ ಭಟ್ಟಿಮಂಟಪವನ್ನು ಪ್ರವೇಶಿಸಿ ಅಲ್ಲಿ ಸಂಸ್ಕøತವೇ ಮೇಲೆಂದೂ ತಮಿಳು ಕೀಳೆಂದೂ ವಾದಿಸುತ್ತಿದ್ದ ಕುಯಕೊಂಡಾನ್ ಎಂಬಾತನನ್ನು ತನ್ನ ಹಾಡಿನ ಪ್ರಭಾವದಿಂದ ಸಾಯುವಂತೆ ಮಾಡಿದನೆಂದೂ ಮತ್ತೆ ಕೆಲವರ ಪ್ರಾರ್ಥನೆಯಂತೆ ಬೇರೆ ಹಾಡು ಹಾಡಿ ಆತನನ್ನು ಬದುಕಿಸಿದನೆಂದೂ ಹೇಳುತ್ತಾರೆ.

	ಪತ್ತುಪಾಟ್ಟಿನಲ್ಲಿರುವ ತಿರುಮುರುಗಾಟ್ರ್ ಪಡೈ ಮತ್ತು ನಡುನಾಲ್‍ವಾಡೈ ಈತನ ಗ್ರಂಥಗಳು. ಇವಲ್ಲದೆ ಕಾವ್ಯ ಸಂಗ್ರಹಗಳಾದ ನಟ್ರಿಣೈಯಲ್ಲಿ 7, ಕುರುಂದೊಗೈಯಲ್ಲಿ 8, ಅಗನಾನೂರೆನಲ್ಲಿ 17, ಪುರನಾನೂರಿನಲ್ಲಿ 3, ತಿರುವಳ್ಳುವಮಾಲೈಯಲ್ಲಿ 1-ಈತ ಬರೆದ ಕವಿತೆಗಳಿವೆ. 11ನೆಯ ತಿರುಮುರೈಯಲ್ಲಿ ಕಾಣಬರುವ ಕಯಿಲೈ ಪಾದಿ ಕಾಳತ್ತಿಪಾದಿ ಅಂತಾದಿ ಮೊದಲಾದ ಹತ್ತು ಗ್ರಂಥಗಳ ಕರ್ತೃವೂ ಈತನೇ ಎಂದು ಕೆಲವರೂ ಈತನಲ್ಲ, ಇನ್ನೊಬ್ಬ ನಕ್ಕೀರದೇವನಾಯನಾರ್ ಎಂದು ಇನ್ನು ಕೆಲವರೂ ಹೇಳುತ್ತಾರೆ. ನಕ್ಕೀರರ್ ನಾಲಡಿ ನಾರ್ಪದ್ ಎಂಬ ಗ್ರಂಥವನ್ನೂ ಈತನೇ ಬರೆದುದೆಂದು ಹೇಳುವುದುಂಟು. ಈತನಿಂದ ರಚಿತವಾದುವೆಂದು ಹೇಳುವ ಬಿಡಿ ಕವಿತೆಗಳೂ ಸಿಗುತ್ತವೆ. ಇರೆಯನಾರ್ ಅಗಪ್ಪರುಳ್ ಎಂಬ ಗ್ರಂಥಕ್ಕೆ ತಾತ್ಪರ್ಯವನ್ನು ಬರೆದವ ಈತನೇ ಎನ್ನಲಾಗಿದೆ. ಕಾಳಹಸ್ತಿಯ ಜ್ಞಾನಪೂಂಗೋದೈ ದೇವಿಯ ಮೇಲೆ ಈತ ಹಾಡಿರುವ ಸಂಸ್ಕøತದ ಸ್ತೋತ್ರವೊಂದು ಹಾಗೂ ಸಂಸ್ಕøತ ನಿಘಂಟು ಒಂದು, ತಂಜಾವೂರಿನ ಪುಸ್ತಕಾಲಯದಲ್ಲಿವೆ ಎನ್ನಲಾಗಿದೆ.

	ಈತ ರಚಿಸಿದ ತಿರುಮುರುಗ್ರಾಟ್ರ್‍ಪಡೈ ಮುರುಗನ ಹಿರಿಮೆಯನ್ನು ಕೊಂಡಾಡುತ್ತದೆ. ಇದು ಮುರುಗನ ಆರುಪಡೈವೀಡ್ ಅಂದರೆ ಸುಬ್ರಹ್ಮಣ್ಯ ನೆಲೆಯಾಗಿರುವ ಆರು ಪ್ರಮುಖ ಕ್ಷೇತ್ರಗಳನ್ನು ವರ್ಣಿಸುತ್ತದೆ. ಇದು ಮುಮುಕ್ಷುವೊಬ್ಬನನ್ನು ಮುಕ್ತನಾದ ಇನ್ನೊಬ್ಬ ಮುರುಗನೆಡೆಗೆ ಕೊಂಡೊಯ್ಯುವುದನ್ನು ವರ್ಣಿಸುತ್ತದೆ. ನೆಡುನಲ್ ವಾಡೈ ಎಂಬುದು ಪ್ರಿಯನ ಅಗಲಿಕೆಯಲ್ಲಿರುವ ವಿರಹಿಣಿಗೆ ಚಳಿಗಾಲ ದೀರ್ಘವಾಗಿರುವುದೆಂದೂ ಯುದ್ಧರಂಗದಲ್ಲಿರುವ ಅವಳ ಪ್ರಿಯನಿಗೆ ಅದೇ ಸುಸಂದರ್ಭ ವಾಗಿರುವುದೆಂದೂ (ಹಗೆಗಳನ್ನು ಕೊಲ್ಲುವುದಕ್ಕೆ) ವರ್ಣಿಸಲಾಗಿದೆ. ಪುರನಾನೂರಿನ ಒಂದು ಹಾಡಿನಲ್ಲಿ ಪಾಂಡ್ಯ ಅರಸನೊಬ್ಬನನ್ನು ಶಿವ, ಬಲದೇವ, ವಿಷ್ಣು, ಮುರುಗ ಇವರುಗಳಿಗೆ ಹೋಲಿಸಿ ಹೊಗಳಲಾಗಿದೆ. ಇನ್ನೊಂದು ಹಾಡಿನಲ್ಲಿ ಅರಸನೂ ದನ ಮೇಯಿಸುವವನೂ ಉಣ್ಣುವ ಅಳತೆ ಒಂದೇ. ಶ್ರೀಮಂತ ಹೆಚ್ಚು ಉಣ್ಣಲಾರ. ಆದುದರಿಂದ ಶ್ರೀಮಂತಿಕೆಯ ಪರಮ ಪ್ರಯೋಜನವೆಂದರೆ ದಾನವೀಯುವುದು. ಎಲ್ಲವನ್ನೂ ನಾವೇ ಅನುಭವಿಸೋಣವೆಂದು ಯೋಚಿಸಿದರೆ ಆ ಶ್ರೀಮಂತಿಕೆಯೂ ತಪ್ಪಿಹೋಗುವುದು ಎಂಬ ಕ್ರಾಂತಿ ಭಾವನೆಯಿದೆ. ಈತ ರಚಿಸಿದ ಪ್ರೇಮಕವನಗಳಲ್ಲಿ ರಾಜತ್ರಯ (ಮೂವೇಂದರ) ಮಾಂಲಕರು, ಮುಂತಾದವರ ಚಾರಿತ್ರಿಕಾಂಶಗಳನ್ನೂ ಅವರು ಆಳಿದ ನಗರಗಳನ್ನೂ ಅಲ್ಲಿಯ ನದಿಗಳನ್ನೂ ಅಲ್ಲಲ್ಲಿ ಹೆಸರಿಸಲಾಗಿದೆ. ಇದರಿಂದ ಅಂದಿನ ಇತಿಹಾಸದ ಮೇಲೆ ಬೆಳಕು ಚೆಲ್ಲಿದಂತಾಗಿದೆ

	ಈತನ ಪ್ರೇಮಕವನಗಳಲ್ಲಿ ನಾಯಕ ಐಶ್ವರ್ಯವನ್ನು ಗಳಿಸುವುದರಲ್ಲಿ ಉದ್ಯುಕ್ತನಾದರೆ ನಾಯಿಕೆ ಅವನ ಗುರಿಗೆ ಅನುಕೂಲೆಯಾಗಿರುತ್ತಾಳೆ. ಆಕೆ ಅಗಲಿಕೆಯ ನೋವನ್ನು ತಾಳಿಕೊಂಡು ನಾಯಕನನ್ನು ಹರಸುವ ಗುಣವುಳ್ಳವಳು. ಸತಿಪತಿಗಳಿಬ್ಬರೂ ಸಮಾನ ಕಾಮಾಪೇಕ್ಷಿಗಳು. ನಕ್ಕೀರರ್ ಹೆಣ್ಣಿನ ಶರೀರ ಸೌಂದರ್ಯ, ರೂಪ ಸೌಂದರ್ಯ, ಅವರ ಬಣ್ಣದ ಅಂದ ಮುಂತಾದುದನ್ನು ಚಿತ್ರಿಸುವುದರಲ್ಲಿ ನಿಷ್ಣಾತ. ಸಂಭೋಗಸಂಭ್ರಮಕ್ಕನುಕೂಲವಾದ ವಸ್ತುಗಳನ್ನೂ ಸನ್ನಿವೇಶಗಳನ್ನೂ ಬಹಿರಂಗವಾಗಿ ವರ್ಣಿಸುವ ಮನೋವೃತ್ತಿಯವ. ನಿಡುನಲ್ ವಾಡೈಯಲ್ಲಿ ಶಯ್ಯಾಗೃಹ, ಮಂಚ ಮೊದಲಾದವುಗಳ ವರ್ಣನಾಭಾಗಗಳಿವೆ.

	ನೋಕ್ಕಿರ್ಕ್ ನಕ್ಕೀರರ್ (ಕಾವ್ಯದರ್ಶನಕ್ಕೆ ನಕ್ಕೀರರ್ ನಿದರ್ಶನ) ಎಂಬ ನಾಣ್ನುಡಿ ಈತನ ಕಾವ್ಯಗುಣದ ಆಳವನ್ನು ತೋರಿಸುತ್ತದೆ. ಈತನನ್ನು ತಮಿಳುನಾಡಿನ ಮೊತ್ತಮೊದಲ ಅತೀಂದ್ರಿಯ ಕವಿಯೆಂದೂ ಕರೆಯಲಾಗಿದೆ.

	ಮದುರೈಯಲ್ಲಿ ಈತನ ದೇವಾಲಯವೊಂದಿದೆ. ತಿರುಪರನ್‍ಕುಂದ್ರದಲ್ಲಿ ಈತನ ಒಂದು ಶಿಲಾವಿಗ್ರಹವಿದ್ದು ಅಲ್ಲಿ ಆಗಾಗ್ಗೆ ಉತ್ಸವಗಳು ನಡೆಯುತ್ತವೆ.			
				(ಎಸ್.ಪಿ.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ